ಈ ದೇಶದ ಅತ್ಯುತ್ತಮ ನಗರ ಸಾರಿಗೆಗಳಲ್ಲೊಂದಾದ ಹಾಗೂ ತನ್ನ ವಿಶಿಷ್ಟ ಸೇವೆ/ಯೊಜನೆಗಳಿಗಾಗಿ ರಾಷ್ರೀಯ ಮತ್ತು ಅಂತರ್ರಾಷ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷನಾಗಿ ನಾನು ದಿನಾಂಕ 4/11/2016 ರಂದು ಅಧಿಕಾರ ವಹಿಸಿಕೊಂಡಿದ್ದು ಹೆಮ್ಮೆ ಎನಿಸುತ್ತಿದೆ.
ಬೆಂಗಳೂರು ನಗರದ ಜನರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲು ಹಗಲಿರುಳೆನ್ನದೆ ದುಡಿಯುತ್ತಿರುವ ಸಂಸ್ಥೆಯ ಕಾರ್ಮಿಕರು ಹಾಗೂ ಅಧಿಕಾರಿಗಳ ಸೇವೆಯನ್ನು ಮುಕ್ತಮನಸ್ಸಿನಿಂದ ಪ್ರಶಂಸಿಸುತ್ತೇನೆ.
ಬೆಂಗಳೂರು ನಗರದ ಜನರ ಜೀವನಾಡಿಯಾಗಿರುವ ಈ ಸಂಸ್ಥೆಯನ್ನು ಜನರ ಅಚ್ಚುಮೆಚ್ಚಿನ ಸಂಸ್ಥೆಯನ್ನಾಗಿ ಪರಿವರ್ತಿಸಲು ಪಣತೊಟ್ಟಿರುತ್ತೇನೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ಸಂಸ್ಥೆ ಎದುರಿಸುತ್ತಿರುವ ಹಲವಾರು ಸವಾಲುಗಳ ಬಗ್ಗೆ ಅರಿವಿರುತ್ತದೆ. ಸಂಸ್ಥೆಯು ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನ ಹಿಂದೆಯು ಸಹ ಸಮರ್ಥವಾಗಿ ಮೆಟ್ಟಿನಿಂತು ಯಶಸ್ಸುಗಳಿಸಿರುತ್ತದೆ. ಆದುದರಿಂದ, ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೂಯ್ಯಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ, ಸವಾಲುಗಳನ್ನು ಎದುರಿಸುವೆಡೆಗೆ ದಿಟ್ಟ ಹೆಜ್ಜೆ ಇಡೋಣ.
ಬೆಂಗಳೂರು ನಗರದ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸಂಸ್ಥೆಯ ಸೇವೆಯು ಜನಪರ-ಜನಮುಖಿಯಾಗಿರಬೇಕು. ಸಮಾಜದೊಡನೆ ಉತ್ತಮ ಸಂಬಂಧ ಹೊಂದಿ ಸಂಸ್ಥೆಯಿಂದ ಜನರು ನಿರೀಕ್ಷಿಸುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬೇಕು. ಸದರಿ ಧ್ಯೇಯವನ್ನು ಸಾಧಿಸುವಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಅತ್ಯವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈಗಾಗಲೆ ಕಾರ್ಯೋನ್ಮುಕವಾಗಿದ್ದು ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್) ಯೋಜನೆಯನ್ನು ಜಾರಿಗೆ ತರುವ ಮೂಲಕ ನೂತನ ತಂತ್ರಜ್ಞಾನ ಅಳವಡಿಕೆಗೆ ಮುನ್ನುಡಿ ಬರೆದಿರುತ್ತದೆ ಹಾಗೂ ಇದರ ಮುಂದುವರಿದ ಭಾಗವಾಗಿ ಸ್ಮಾರ್ಟ್‍ಕಾರ್ಡ್ ಯೋಜನೆಯನ್ನು ಜಾರಿಗೊಳಿಸುವ ಹಂತದಲ್ಲಿರುತ್ತದೆ. ಈ ಯೋಜನೆಗಳು ಮುಂದಿನ ದಿನಗಳಲ್ಲಿ ಸಂಸ್ಥೆಯ ಸೇವೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಅತ್ಯಂತ ಸಹಕಾರಿಯಾಗಲಿವೆ. ಆದುದರಿಂದ, ಈ ಯೋಜನೆಗಳ ಯಶಸ್ಸಿಗಾಗಿ ನಾವೆಲ್ಲರು ಶ್ರಮಿಸೋಣ, ಸಹಕರಿಸೋಣ.
ನಗರದ ವಾಯು ಮಾಲಿನ್ಯ ನಿಯಂತ್ರಿಸಿ ಆರೋಗ್ಯಕರ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯ ಪಾತ್ರ ತುಂಬ ಪ್ರಮುಖವಾದುದು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸೋಣ. ಸರ್ಕಾರದ ಸ್ವಚ್ಚಭಾರತ್ ಆಂದೋಲನಕ್ಕೆ ಪೂರಕವಾಗಿ ಸಂಸ್ಥೆಯ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಆದ್ಯತೆ ನೀಡೋಣ.

ಪ್ರಯಾಣಿಕರ ಅನುಕೂಲಕ್ಕಾಗಿ ಇತಿಹಾಸ ಪ್ರಸಿದ್ಧವಾದ ಕೃಷ್ಣರಾಜೇಂದ್ರ ಮಾರುಕಟ್ಟೆಯ ಸಮೀಪ ಕಲಾಸಿಪಾಳ್ಯದಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ನೂತನ ನವೀನ ಮಾದರಿಯ ಟಿಟಿಎಂಸಿ/ಬಸ್ ನಿಲ್ದಾಣವನ್ನು ಮತ್ತು ಅಂಜನಾಪುರದ ನೂತನ ಘಟಕದ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ನೆರವೇರಿಸಿರುತ್ತಾರೆ. ಮಂಡೂರು ಮತ್ತು ಕೊಡತಿಯಲ್ಲಿ ನೂತನ ಬಸ್ ಘಟಕದ ನಿರ್ಮಾಣ ಸಂಪೂರ್ಣಗೊಂಡಿದ್ದು, ಅವುಗಳು ಕೂಡ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ.
ಇವುಗಳಲ್ಲದೇ ರೈತರು ಹಾಗೂ ಗ್ರಾಮಸ್ಥರುಗಳ ಅನುಕೂಲಕ್ಕಾಗಿ ಸಾದರ ಮಂಗಲ, ದೇವನಹಳ್ಳಿ, ನಾಗದಾಸನಹಳ್ಳಿಗಳಲ್ಲಿ ಹಾಗೂ ಜೆ.ಎನ್.ನರ್ಮ್ ಯೋಜನೆಯಡಿಯಲ್ಲಿ ಮಾದಪ್ಪನ ಹಳ್ಳಿ, ಉತ್ತನ ಹಳ್ಳಿ ಮತ್ತು ಬೈರತಿ ಗ್ರಾಮಗಳಲ್ಲಿ ನೂತನ ಬಸ್ ಘಟಕಗಳ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ಕೆಂಗೇರಿ ಉಪನಗರ, ಮಲ್ಲಸಂದ್ರ ಮತ್ತು ಅಂಜನಾಪುರಗಳಲ್ಲಿ ನೂತನ ಬಸ್ ನಿಲ್ದಾಣಗಳನ್ನು ಮತ್ತು ದಾಸನಪುರದಲ್ಲಿ ನೂತನ ವಿಭಾಗೀಯ ಕಾರ್ಯಾಗಾರವನ್ನು ನಿರ್ಮಿಸಲಾಗುವುದು.
ಸಂಸ್ಥೆಯ ಎಲ್ಲಾ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವ ಸಲುವಾಗಿ ನೂತನವಾಗಿ ಮಲ್ಟಿಸ್ಪೆಶ್ಯಾಲಿಟಿ ಆಸ್ಪತ್ರೆ ನಿರ್ಮಿಸಲು ಸಹ ತೀರ್ಮಾನಿಸಲಾಗಿರುತ್ತದೆ. ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು.
ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಲುವಾಗಿ ಪ್ರಸ್ತುತ ವರ್ಷದಲ್ಲಿ ಸುಮಾರು 1958 ಹೊಸ ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕ ಸಮಾಜದ ಏಳಿಗೆ ಹಾಗು ಅಭ್ಯುದಯಕ್ಕಾಗಿ ಸಂಸ್ಥೆಯ ವತಿಯಿಂದ ಶ್ರಮಿಸುವುದು ಅಧ್ಯಕ್ಷರ ಆಧ್ಯತೆಯಾಗಿರುತ್ತದೆ.